Farm Trials

ಇತರ ಕಲಿಕಾ ಕೇಂದ್ರಗಳು

ವಿಶ್ವವಿದ್ಯಾನಿಲಯದ ವಿವಿಧ ಮಹಾ ವಿದ್ಯಾಲಯಗಳಲ್ಲಿ ಕೈಗೊಳ್ಳುವ ನಿಯತ ಪಠ್ಯಕ್ರಮದ ಜೊತೆಗೆ, ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆ ಹಾಗೂ ತರಬೇತಿಗಾಗಿ ಹಲವಾರು ಔಪಚಾರಿಕ ಮತ್ತಯ ಅನೌಪಚಾರಿಕ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಈ ವ್ಯವಸ್ಥೆಗಳು ಕಲಿಕೆಯ ಮಹತ್ವದ ಕೇಂದ್ರಗಳಾಗಿದ್ದು ವರ್ಷಗಳು ಕಳೆದಂತೆ ಅವು ವಿಸ್ತರಿತವಾಗುತ್ತಿವೆ. ಅಂತಹ ಕೆಲವು ಪ್ರಮುಖ ಕಲಿಕಾ ಕೇಂದ್ರಗಳ ಸಂಕ್ಷಿಪ್ತ ವಿವರಗಳನ್ನು ಈ ಮುಂದೆ ನೀಡಲಾಗಿದೆ-
ಸಸ್ಯೋದ್ಯಾನ
ವಿಶ್ವವಿದ್ಯಾನಿಲಯವು ತನ್ನ ಜಿ.ಕೆ.ವಿ.ಕೆ. ಆವರಣದಲ್ಲಿ ಸುಮಾರು 100 ಎಕರೆಗಳ ವಿಸ್ತೀರ್ಣದ ಸಸ್ಯೋದ್ಯಾನವನ್ನು ಹೊಂದಿದೆ. 1975ರಲ್ಲಿ ಸ್ಥಾಪಿತವಾದ ಈ ಉದ್ಯಾನವನ್ನು ಎಚ್ಚರಿಕೆಯಿಂದ ಯೋಜಿಸಲಾಗಿದ್ದು ವಿವಿಧ ಸಸ್ಯ ಕುಟುಂಬಗಳನ್ನು ಪ್ರತಿನಿಧಿಸುವಂತೆ ವ\ ವಿಭಾಗಗಳಾಗಿ ವ್ಯವಸ್ಥೆಗೊಳಿಸಲಾಗಿದೆ. ಸಸ್ಯೋದ್ಯಾನಕ್ಕೆ ಪೂರಕವಾಗಿ ಒಂದು ಉತ್ತಮ ಸಂಗ್ರಹದ ಶುಷ್ಕ ಸಸ್ಯಾಲಯವಿದ್ದು ಅದರ ಉಸ್ತುವಾರಿಗೆ ಒಂದು ಪೂರ್ಣಕಾಲಿಕ ಮೇಲ್ವಿಚಾರಕರಿದ್ದಾರೆ. ರಾಜ್ಯದೆಲ್ಲೆಡೆಯಿಂದ ವಿಶೇಷವಾಗಿ ಪಶ್ಚಿಮ ಘಟ್ಟಗಳಿಂದ ಈ ಸಸ್ಯೋದ್ಯಾನಕ್ಕೆ ಸಸ್ಯ ಸಂಗ್ರಹಗಳನ್ನು ತಂದು ನಿಯತವಾಗಿ ಸೇರಿಸಲಾಗುತ್ತಿದೆ. ಈ ಸಸ್ಯೋದ್ಯಾನದಲ್ಲಿ ಹಲವಾರು ತಾತ್ಪೂರ್ತಿಕ ಸಂಶೋಧನಾ ಕಾರ್ಯಕ್ರಮಗಳು ಚಾಲನೆಯಲ್ಲಿವೆ. ವರ್ಷಗಳು ಕಳೆದಂತೆ ಸಸ್ಯೋದ್ಯಾನವು ಸ್ನಾತಕ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ಪ್ರಮುಖ ಕಲಿಕೆಯ ಕೇಂದ್ರವಾಗಿದೆ. ಹಲವಾರು ವಿಭಾಗಗಳು ಸಸ್ಯೋದ್ಯಾನ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಸಸ್ಯ ವರ್ಗೀಕರಣಶಾಸ್ತ್ರದ ಜ್ಞಾನವನ್ನು ನೀಡಲು ಬಳಸಿದರೆ ಸಂಶೋಧನಾ ವಿದ್ಯಾರ್ಥಿಗಳು ಬೇರೆಡೆ ದುರ್ಲಭವಿರುವ ಸಸ್ಯಗಳನ್ನು ತಮ್ಮ ಸಂಶೋಧನೆಗೆ ಬಳಸಿಕೊಳ್ಳುತ್ತಾರೆ.
ಸಂಜೀವಿನಿ ವನ
ಸಸ್ಯೋದ್ಯಾನಕ್ಕೆ ಹತ್ತಿರದಲ್ಲಿಯೇ ಸಂಜೀವಿನಿ ವನವಿದ್ದು, ಅದರಲ್ಲಿ ಔಷಧೀಯ ಮತ್ತು ಸುಗಂಧದ್ರವ್ಯ ಸಸ್ಯಗಳನ್ನು ಬೆಳೆಸಲಾಗಿದೆ. ವನವನ್ನು ತೋಟಗಾರಿಕೆ ವಿಭಾಗವು ನಿರ್ವಹಿಸುತ್ತಿದ್ದು ಇದು ರಾಜ್ಯದಲ್ಲಿಯೇ ಒಂದು ವಿಶಿಷ್ಟ ಸಸ್ಯೋದ್ಯಾನವಾಗಿದೆ. ಇಲ್ಲಿ 300ಕ್ಕೂ ಹೆಚ್ಚು ವಿವಿಧ ಸಸ್ಯ ಪ್ರಭೇದಗಳನ್ನು ನಿರ್ವಹಿಸಲಾಗುತ್ತಿದೆ ಹಾಗೂ ಅವುಗಳು ಇರುವ, ವಿಸ್ತಾರ, ಸಂವರ್ಧನೆ ಮುಂತಾದ ಮಾಹಿತಿ ಕುರಿತಂತೆ ಸಂಶೋಧನೆಯನ್ನು ವನದಲ್ಲಿ ಕೈಗೊಳ್ಳಲಾಗುತ್ತಿದೆ. ಸಸ್ಯೋದ್ಯಾನವು ವಿದ್ಯಾರ್ಥಿಗಳಿಗೆ, ಸಂಶೋಧನಾ ವಿದ್ವಾಂಸರಿಗೆ ಮತ್ತು ಆಸಕ್ತ ಸಾರ್ವಜನಿಕರಿಗೆ ಒಂದು ಪ್ರಮುಖ ಕ್ಷೇತ್ರ ಶೈಕ್ಷಣಿಕ ಸಂಪನ್ಮೂಲವಾಗಿ ಕಾರ್ಯ ನಿರ್ವಹಿಸುತ್ತಿದೆ. ವನದಲ್ಲಿ ಲಭ್ಯವಿರುವ ಪ್ರಭೇದಗಳ ಮೇಲೆ ಸಂಶೋಧನೆಗಳನ್ನು ನಡೆಸಿ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.
ಕೃಷಿ ವಸ್ತುಸಂಗ್ರಹಾಲಯ
ವಿಶ್ವವಿದ್ಯಾನಿಲಯವು ಹೆಬ್ಬಾಳ ಆವರಣದಲ್ಲಿ ಕೃಷಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದೆ. ಈ ವಸ್ತುಸಂಗ್ರಹಾಲಯವು ಕೃಷಿ, ಪಶುವೈದ್ಯಕೀಯ, ಮೀನುಗಾರಿಕೆ, ರೇಷ್ಮೆಕೃಷಿಗಳನ್ನೊಳಗೊಂಡಂತೆ ಕೃಷಿ ವಿಜ್ಞಾನದ ವಿವಿಧ ವಿಷಯಗಳ ಬಗೆಗಿನ ಅಭಿವೃದ್ಧಿಯನ್ನು ಪ್ರದರ್ಶಿಸುತ್ತದೆ. ವಸ್ತುಸಂಗ್ರಹಾಲಯವು ಅಧಿಕ ಇಳುವರಿ ಬೆಳೆ ಮತ್ತು ಜಾನುವಾರುಗಳ ಕಾರ್ಯಕ್ಷಮತೆ, ಜಲಾನಯನ ಪದ್ಧತಿಗಳ, ಒಕ್ಕಣೆ ಮತ್ತು ಕೊಯ್ಲು ತಂತ್ರಜ್ಞಾನಗಳನ್ನೊಳಗೊಂಡಂತೆ ಕೃಷಿ ತಂತ್ರಜ್ಞಾನಗಳ ವಿವಿಧ ಪರಿಕಲ್ಪನೆಗಳ ಪ್ರಾತ್ಯಕ್ಷಿಕೆ ಹೊಂದಿರುವ ಪ್ರತ್ಯೇಕ ವಿಭಾಗವನ್ನು ಸಹ ಹೊಂದಿದೆ. ಸಾರ್ವಜನಿಕರಿಗೆ ವಿವಿಧ ಚಟುವಟಿಕೆಗಳ ಪ್ರದರ್ಶನಕ್ಕೆಂದು ವಿನ್ಯಾಸಗೊಳಿಸಲಾಗಿದ್ದರೂ, ವಿಶೇಷವಾಗಿ ಜೀವಂತ ವಿಭಾಗವು ಕಾಲೇಜಿನ ವಿದ್ಯಾರ್ಥಿಗಳಿಗೆ ವಿಸ್ತೃತ ತರಬೇತಿ ನೀಡಲು ಬಳಸಲಾಗುತ್ತಿದೆ. ಕೃಷಿ ವಸ್ತುಸಂಗ್ರಹಾಲಯದ ಭಾಗವಾಗಿರುವ ಜೀವಂತ ವಸ್ತುಸಂಗ್ರಹಾಲಯವು ವಿವಿಧ ಪ್ರಾಣಿ, ಮೀನು ಮತ್ತು ಕುಕ್ಕುಟ ಪ್ರಭೇದಗಳ ಜೊತೆಗೆ ವಿವಿಧ ಬೆಳೆ ಹಾಗೂ ತಳಿಗಳ ಪ್ರಭೇದಗಳನ್ನು ಪ್ರದರ್ಶಿಸಿದ್ದು ಇದು ವಿಶ್ವವಿದ್ಯಾನಿಲಯದ ಕಲಿಕೆಯ ವಿಶಿಷ್ಟ ಸೌಲಭ್ಯವಾಗಿದೆ. ಈ ವಸ್ತುಸಂಗ್ರಹಾಲಯವು ಬೆಂಗಳೂರಿನ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳ ಆಕರ್ಷಣೀಯ ಸ್ಥಳವಾಗಿದೆ.

Additional information